ಕಲ್ಯಾಣಮ್ಮ, ಆರ್ : (೧೮೯೪-೧೯೬೫) ಸ್ತ್ರೀಸಮಾಜದ ಮತ್ತು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿದ ಮಹಿಳೆ. ಹುಟ್ಟಿದ್ದು ಬೆಂಗಳೂರಿನಲ್ಲಿ. ೧೯೦೬ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯನ್ನು ಮುಗಿಸಿದರು. ಕೇವಲ ಹತ್ತು ವರ್ಷ ವಯಸ್ಸಿನಲ್ಲಿಯೇ ವಿವಾಹವಾಯಿತು. ಮೂರೇ ತಿಂಗಳಿನಲ್ಲಿ ವಿಧವೆಯಾದರು. ದುರ್ದೈವಕ್ಕೆ ಅಂಜದೆ ಧೈರ್ಯದಿಂದ ಕನ್ನಡ ನಾಡಿನ ಸೇವೆಗೆ ಮುಂದಡಿಯಿಟ್ಟರು.
ಮೂರು ದಶಕಗಳವರೆಗೆ ಸರಸ್ವತಿ ಮಾಸಪತ್ರಿಕೆಯ ಮೂಲಕ ಸಾಹಿತ್ಯ ಸೇವೆಯನ್ನೂ ಶಾರದಾ ಸ್ತ್ರೀಸಮಾಜವನ್ನು ಸ್ಥಾಪಿಸಿ (೧೯೧೩) ಮಹಿಳಾಸೇವೆಯನ್ನೂ ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು ಸ್ಥಾಪಿಸಿ (೧೯೩೮) ಮಕ್ಕಳ ಸೇವೆಯನ್ನೂ ನಗರ ಸಭೆಗೆ ಪ್ರಪ್ರಥಮ ಬಾರಿಗೆ ಮಹಿಳಾ ಸದಸ್ಯೆಯಾಗಿದ್ದು ನಗರ ಸಭೆಯ ಉಪಾಧ್ಯಕ್ಷಿಣಿಯಾಗಿದ್ದು, ಅಸೆಂಬ್ಲಿ ಮತ್ತು ಸೆನೆಟ್ಟಿನಲ್ಲಿ ಸದಸ್ಯೆಯಾಗಿದ್ದುಕೊಂಡು ಸಮಾಜ ಸೇವೆಯನ್ನೂ ಮಾಡಿ ಈಕೆ ಹೆಸರು ಗಳಿಸಿದರು.

೧೯೪೯ರಲ್ಲಿ ಸರಸ್ವತಿ ಪತ್ರಿಕೆಯ ರಜತೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಇವರಿಗೆ ಒಂದು ನಿಧಿಯನ್ನು ಅರ್ಪಿಸಲಾಯಿತು. ಇವರು ಸೃಷ್ಟಿಸಿದ ಸಾಹಿತ್ಯರಾಶಿ ಸಣ್ಣದೇನಲ್ಲ. ಕಥೆ, ಕಾದಂಬರಿ, ನಾಟಕ, ಶಿಶುಸಾಹಿತ್ಯ ಇತ್ಯಾದಿ ಪ್ರಕಾರಗಳಲ್ಲೀಕೆ ವಿಪುಲವಾಗಿ ಬರೆದಿದ್ದಾರೆ. ಅಲ್ಲೆಲ್ಲ ಸ್ತ್ರೀಯರ, ಅಬಲೆಯರ, ಕಷ್ಟ ಸುಖಗಳನ್ನೂ ಸಮಾಜದ ಸಮಸ್ಯೆಗಳನ್ನೂ ಚಿತ್ರಿಸಿದ್ದಾರೆ. ಮಕ್ಕಳು ನವಸಮಾಜದ ನಿರ್ಮಾಪಕರೆಂದು ತಿಳಿದ ಇವರು ಅವರ ಮನಸ್ಸನ್ನು ರೂಪಿಸಲು ತಕ್ಕ ಕೃತಿಗಳನ್ನು ರಚಿಸಿದ್ದಾರೆ.

ಇವರ ಸಾರಸ್ವತ ಸೇವೆ ಹೀಗಿದೆ: ಪ್ರಿಯಂವದ, ಸುಖಲತಾ, ಭಕ್ತಮೀರಾ ಮಾಧವಿ, ನಿರ್ಮಲಾ, ನೀರದಾ, ರಣಕೇಸರಿ, ಷಹಜಹಾನ್ ಮೊದಲಾದ ಕಾದಂಬರಿಗಳು, ವರದಕ್ಷಿಣೆ, ಯದುರಾಯ, ದರಿದ್ರನಾರಾಯಣ ಮೊದಲಾದ ನಾಟಕಗಳು, ಪಂಚಕಜ್ಜಾಯ, ಪುಟಾಣಿ ಕಥೆಗಳು, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ ಮೊದಲಾದ ಮಕ್ಕಳ ಕಥೆ ಮತ್ತು ಕವಿತೆಗಳು.

ಹೀಗೆ ನಾಡು ನುಡಿಗಳ ಅಭಿಮಾನಿಯಾಗಿ ಸೇವೆ ಮಾಡುತ್ತಿದ್ದ ಕಲ್ಯಾಣಮ್ಮನವರಿಗೆ ಶ್ರೀಮನ್ಮಹಾರಾಜರವರು ಪ್ರಪ್ರಥಮವಾಗಿ ಸಾರ್ವಜನಿಕ ಪ್ರಶಸ್ತಿಯನ್ನಾಗಿ ಸುವರ್ಣ ಪದಕವನ್ನಿತ್ತು ಗೌರವಿಸಿದರು. ವಂಗ ಸಾಹಿತ್ಯ ಸಂಫದವರು ಇವರಿಗೆ ವಿದ್ಯಾವಿನೋದಿನಿ ಎಂಬ ಬಿರುದನ್ನಿತ್ತರು. ಇವರ ಕಾರ್ಯಚಟುವಟಿಕೆಗಳನ್ನು ಕಂಡು ಮೆಚ್ಚಿದ ಅಮೆರಿಕದಿಂದಲೂ ಇವರಿಗೆ ಆಹ್ವಾನ ಬಂದಿತ್ತು.

ಕಲ್ಯಾಣಮ್ಮನವರ ಜ್ಞಾಪಕಾರ್ಥವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸ್ಮಾರಕನಿಧಿಯೊಂದನ್ನು ಸ್ಥಾಪಿಸಿದೆ.	(ಕೆ.ಟಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ